ಕುಕ್ಕನೂರು

 ಮೈಸೂರು ರಾಜ್ಯದಲ್ಲಿ ಇಟಗಿಯಿಂದ ಉತ್ತರಕ್ಕೆ ನಾಲ್ಕು ಮೈಲಿ ದೂರದಲ್ಲಿರುವ ಒಂದು ಸ್ಥಳ. ಇಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಕಲ್ಯಾಣ ಚಾಳುಕ್ಯರ ವಾಸ್ತುಶಿಲ್ಪದ ನವಲಿಂಗ ಮತ್ತು ಕಲ್ಲೇಶ್ವರ ದೇವಾಲಯಗಳು ಮುಖ್ಯವಾದವು. ಇವುಗಳ ಶೈಲಿ ಬಾದಾಮಿ ಚಾಳುಕ್ಯರ ಮತ್ತು ಕಲ್ಯಾಣಿ ಚಾಳುಕ್ಯರ ಶೈಲಿಗಳ ನಡುವಣದು. ನವಲಿಂಗ ದೇವಾಲಯದ ಶಿಖರ ಸ್ವಲ್ಪಮಟ್ಟಿಗೆ ಪಟ್ಟದಕಲ್ಲಿನ ಶಿಖರವನ್ನು ಹೋಲುತ್ತದೆ. ಕಲ್ಲೇಶ್ವರ ದೇವಾಲಯದ ಶಿಖರ ಪಟ್ಟದಕಲ್ಲಿನ ಶಿಖರದಂತಿಲ್ಲ. ಆ ದೇವಾಲಯದ ಶಿಖರಕ್ಕೆ ಕಲ್ಯಾಣ ಚಾಳುಕ್ಯರ ಶಿಲ್ಪದ ನಮೂನೆಯ ಅಡಿಗಲ್ಲನ್ನು ಹಾಕಿದೆಯೆಂದು ಹೇಳಬಹುದು. ಕಂಬಗಳ ಶಿಲ್ಪವೂ ನವಲಿಂಗ ದೇವಾಲಯದ್ದಕ್ಕಿಂತ ಹೆಚ್ಚು ಪ್ರಗತಿ ಹೊಂದಿದೆ. ಈ ದೇವಾಲಯದ ಬ್ರಹ್ಮ ಮತ್ತು ಶಿವರ ಮೂರ್ತಿಶಿಲ್ಪಗಳು ಅಂದವಾಗಿದೆ.

(ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ